ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS):
ಕರ್ನಾಟಕ ರಾಜ್ಯದಲ್ಲಿ ಆಧುನಿಕ ವೈದ್ಯಪದ್ಧತಿ ಹಾಗೂ ಭಾರತೀಯ ವೈದ್ಯಪದ್ಧತಿಗಳಲ್ಲಿ ಸೂಕ್ತ ಮತ್ತು ವ್ಯವಸ್ಥಿತವಾದ ಶಿಕ್ಷಣ, ಬೋಧನೆ, ತರಬೇತಿ ಮತ್ತು ಸಂಶೋಧನೆಯನ್ನು ಖಚಿತ ಪಡಿಸುವ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವುದು ಮತ್ತು ನಿಗಮಿತಗೊಳಿಸುವುದು ಯುಕ್ತವಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 1994ರ ಅನ್ವಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಿತು. ವಿಶ್ವವಿದ್ಯಾಲಯವು 1996ರ ಜೂನ್ 1ರಂದು ಪ್ರಾರಂಭವಾದ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದಲ್ಲಿರುವ ಇತರೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜನೆ ಹೊಂದಿದ್ದ ಆರೋಗ್ಯ ವಿಜ್ಞಾನಗಳ ವಿಷಯದ ಸುಮಾರು 210 ಮಹಾವಿದ್ಯಾಲಯಗಳು ನೂತನವಾಗಿ ಸ್ಥಾಪಿತವಾದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸುಪರ್ದಿಗೆ ಕೊಡಲಾಯಿತು.
ಕರ್ನಾಟಕ ರಾಜ್ಯದಾದ್ಯಂತ ಹರಡಿರುವ ಸುಮಾರು 700ಕ್ಕಿಂತಲೂ ಅಧಿಕ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಹಾಗೂ ಯೋಗಶಿಕ್ಷಣ, ಯುನಾನಿ, ಫಾರ್ಮಸಿ, ನರ್ಸಿಂಗ್, ಫಿಜಿಯೋಥೆರಪಿ ಹಾಗೂ ಇತರೆ ಅರೆವೈದ್ಯಕೀಯ ಮಹಾವಿದ್ಯಾಲಯಗಳಿಗೆ ಸಂಯೋಜನೆ ನೀಡಿ, ದೇಶದಲ್ಲಿಯೇ ಅತಿ ದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೆಂಬ ಖ್ಯಾತಿಯನ್ನು ಹೊಂದಿದೆ.